ನಮ್ಮ ಹೊಸ ವೆಬ್ಸೈಟ್ ಅನ್ನು ಇನ್ನಷ್ಟು ಉತ್ತಮಪಡಿಸಲು, ನಿಮ್ಮ ಸಲಹೆಗಳು ನಮಗೆ ಬಹಳ ಮುಖ್ಯ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಇಲ್ಲಿ ಹಂಚಿಕೊಳ್ಳಿ
Indian Music Experience Museum- Karnataka Tourism
ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ (IME)
ಸ್ವರ ಲೋಕದ ಅದ್ಭುತ ಪಯಣ
UBENGALURU GEOTAG
ಸಂಗೀತ ನನಗೆ ಶಾಂತಿಯನ್ನು ನೀಡಿದೆ. ಯಾವುದೋ ವಿಷಯಕ್ಕೆ ಮನಸ್ಸು ತೀವ್ರವಾಗಿ ಕಲಕಿದಾಗ, ಸಂಗೀತವು ಕ್ಷಣಮಾತ್ರದಲ್ಲಿ ನನ್ನನ್ನು ಸಮಾಧಾನಪಡಿಸಿದ ಸಂದರ್ಭಗಳು ನನಗಿವೆ. ಕೋಪವನ್ನು ಗೆಲ್ಲಲು ಸಂಗೀತ ನನಗೆ ನೆರವಾಗಿದೆ.” – ಮಹಾತ್ಮ ಗಾಂಧಿ
ಗಾಂಧೀಜಿಯವರ ಈ ಮಾತುಗಳೇ ಸಂಗೀತದ ಶಕ್ತಿಯನ್ನು ಸಾರುತ್ತವೆ. ಅಂತಹ ಅಪಾರ ಶಕ್ತಿಯುಳ್ಳ ಭಾರತೀಯ ಸಂಗೀತದ ವೈವಿಧ್ಯತೆಯನ್ನು ಒಂದೇ ಸೂರಿನಡಿ ಸಂಭ್ರಮಿಸುವ ತಾಣವೇ ಬೆಂಗಳೂರಿನಲ್ಲಿರುವ ‘ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ’ (IME). ಇದು ಭಾರತದ ಮೊಟ್ಟಮೊದಲ ಸಂವಾದಾತ್ಮಕ (Interactive) ಸಂಗೀತ ಸಂಗ್ರಹಾಲಯ.
ಸಂಗೀತದ ಈ ಭವ್ಯ ಭವನದ ವಿಶೇಷತೆಗಳು:
ವೈವಿಧ್ಯತೆಯಲ್ಲಿ ಏಕತೆ: ಭಾರತವು ಕಲೆ ಮತ್ತು ಸಂಸ್ಕೃತಿಯ ತವರೂರು. ಇಲ್ಲಿನ ಸಂಗೀತವು ಅನಾಾದಿಕಾಲದಿಂದಲೂ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ಪ್ರತಿ ಗ್ಯಾಲರಿಯೂ ಭಾರತದ ವಿವಿಧ ಪ್ರಾಂತ್ಯಗಳ ಗಾಯನ, ವಾದ್ಯ ಮತ್ತು ಜನಪದ ಕಲೆಗಳ ಕಥೆಯನ್ನು ಹೇಳುತ್ತದೆ.
ವಿಶಾಲವಾದ ಕಲಾಮಂದಿರ: ಸುಮಾರು ೫೦,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಮ್ಯೂಸಿಯಂ, ೩ ಅಂತಸ್ತುಗಳು ಮತ್ತು ೯ ಅದ್ಭುತ ಪ್ರದರ್ಶನ ಗ್ಯಾಲರಿಗಳನ್ನು ಒಳಗೊಂಡಿದೆ.
ದಶಕದ ಪರಿಶ್ರಮ: ನಮ್ಮ ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಅದನ್ನು ಸಂರಕ್ಷಿಸುವ ಉದಾತ್ತ ಉದ್ದೇಶದೊಂದಿಗೆ, ಸುಮಾರು ೧೦ ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಈ ಸ್ವರಲೋಕವನ್ನು ನಿರ್ಮಿಸಲಾಗಿದೆ.
ಗ್ಯಾಲರಿಗಳು
ಸಂಗೀತದ ಬಗ್ಗೆ ಅಪಾರ ಜ್ಞಾನವಿರುವವರಿಗಷ್ಟೇ ಈ ತಾಣ ಸೀಮಿತವಾಗಿಲ್ಲ; ಇಲ್ಲಿನ ಪ್ರತಿ ಅಣುವಿನಲ್ಲೂ ಪ್ರತಿಯೊಬ್ಬರಿಗೂ ಇಷ್ಟವಾಗುವ ಯಾವುದೋ ಒಂದು ವಿಶೇಷತೆ ಅಡಗಿದೆ. ನಮ್ಮ ಸಂಸ್ಕೃತಿಯ ‘ನವರಸ’ಗಳನ್ನು ಪ್ರತಿಬಿಂಬಿಸುವಂತೆ ಇಲ್ಲಿನ ಒಂಬತ್ತು ಪ್ರದರ್ಶನ ಮಳಿಗೆಗಳು ಸಂಗೀತ ಮತ್ತು ನೃತ್ಯದ ವಿವಿಧ ಆಯಾಮಗಳನ್ನು ಕಣ್ಣಮುಂದೆ ತರುತ್ತವೆ. ಪ್ರಮುಖವಾಗಿ ‘ದ ಸ್ಟಾರ್’ (The Star) ಗ್ಯಾಲರಿಗೆ ನೀವು ಕಾಲಿಡುತ್ತಿದ್ದಂತೆಯೇ, ಭಾರತೀಯ ಸಂಗೀತ ಲೋಕದ ನೂರು ಮಹಾನ್ ಚೇತನಗಳ ಸ್ಮರಣೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ತಂಬೂರಿ ಮತ್ತು ಪಂಡಿತ್ ಭೀಮಸೇನ್ ಜೋಶಿ ಅವರು ಸಂಗೀತ ಕಚೇರಿಗಳಲ್ಲಿ ಧರಿಸುತ್ತಿದ್ದ ಉಡುಪುಗಳನ್ನು ಇಲ್ಲಿನ ಗ್ಯಾಲರಿಯಲ್ಲಿ ಅತ್ಯಂತ ಗೌರವಪೂರ್ವಕವಾಗಿ ಪ್ರದರ್ಶಿಸಲಾಗಿದೆ.
ಇದರ ಬೆನ್ನಲ್ಲೇ ಬರುವ ‘ರೀಚಿಂಗ್ ಔಟ್’ (Reaching Out) ಮಳಿಗೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ಇಲ್ಲಿ ಧ್ವನಿಮುದ್ರಣದ ಇತಿಹಾಸವನ್ನು ತೆರೆದಿಡುವ ಅಪರೂಪದ ಫೋನೋಗ್ರಾಫ್ಗಳು ಮತ್ತು ವ್ಯಾಕ್ಸ್ ಸಿಲಿಂಡರ್ಗಳ ಸಂಗ್ರಹವಿದೆ. ಹಳೆಯ ಕಾಲದ ಗ್ರಾಮಫೋನ್ ಜೊತೆಗೆ ಸುಂದರವಾದ ಫೋಟೋ ತೆಗೆದುಕೊಳ್ಳುವ ಅವಕಾಶದೊಂದಿಗೆ, ಒಂದು ಪುಟ್ಟ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಇಲ್ಲಿದೆ. ಅಂದಿನ ಗ್ರಾಮಫೋನ್ ಯುಗದಿಂದ ಇಂದಿನ ಮೊಬೈಲ್ ಫೋನ್ ಕಾಲದವರೆಗೆ ಸಂಗೀತದ ಧ್ವನಿಮುದ್ರಣ ತಂತ್ರಜ್ಞಾನವು ಹೇಗೆಲ್ಲಾ ವಿಕಸನಗೊಂಡಿದೆ ಎಂಬ ಅದ್ಭುತ ಪಯಣವನ್ನು ನೀವಿಲ್ಲಿ ಕಣ್ಣಾರೆ ಕಾಣಬಹುದು.
ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಹಿಂದಿ ಚಲನಚಿತ್ರ ಸಂಗೀತದ ವಿವಿಧ ಯುಗಗಳನ್ನು ಇಲ್ಲಿನ ‘ಸ್ಟೋರೀಸ್ ಥ್ರೂ ಸಾಂಗ್’ (Stories through song) ವಿಭಾಗವು ಅತ್ಯಂತ ಮನೋಜ್ಞವಾಗಿ ಅನಾವರಣಗೊಳಿಸುತ್ತದೆ. ಇಲ್ಲಿನ ಐತಿಹಾಸಿಕ ಹಿನ್ನೆಲೆ ಸಂಗೀತ ಮತ್ತು ಜನಪ್ರಿಯ ಸಿನೆಮಾಗಳ ಪೋಸ್ಟರ್ಗಳು ಪ್ರವಾಸಿಗರಿಗೆ ಸುಂದರವಾದ ಫೋಟೋ ತೆಗೆದುಕೊಳ್ಳಲು ಉತ್ತಮ ಅವಕಾಶ ನೀಡುತ್ತವೆ. ಇನ್ನು ದೇಶಪ್ರೇಮದ ಗೀತೆಗಳನ್ನು ಕೇಳಿದಾಗ ಮೈಮನ ಪುಳಕಗೊಳ್ಳುವುದು ಸಹಜ; ಇದನ್ನು ಪ್ರತಿಬಿಂಬಿಸುವ ‘ಸಾಂಗ್ಸ್ ಆಫ್ ಸ್ಟ್ರಗಲ್’ (Songs of Struggle) ಗ್ಯಾಲರಿಯಲ್ಲಿ ವಂದೇ ಮಾತರಂ ಗೀತೆಯ ಸುಮಾರು ೩೫ಕ್ಕೂ ಹೆಚ್ಚು ಆವೃತ್ತಿಗಳು, ಗಾಂಧೀಜಿಯವರು ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಬರೆದ ಪತ್ರದ ಪ್ರತಿಕೃತಿ ಹಾಗೂ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿದಾಯಕ ಗೀತೆಗಳನ್ನು ಸಂಗ್ರಹಿಸಿಡಲಾಗಿದೆ.
ಸಂಗೀತ ವಾದ್ಯಗಳ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುವ ‘ಇನ್ಸ್ಟ್ರುಮೆಂಟ್ಸ್ ಗ್ಯಾಲರಿ’ (Instruments Gallery) ಯಲ್ಲಿ ನವಿಲಿನ ಆಕಾರದ ‘ಮಯೂರ ವೀಣೆ’ ಮತ್ತು ಹಾವಿನ ಆಕೃತಿಯ ‘ನಾಗಫಣಿ’ಯಂತಹ ಅಪರೂಪದ ವಾದ್ಯಗಳು ನೋಡುಗರನ್ನು ಬೆರಗುಗೊಳಿಸುತ್ತವೆ. ಇಲ್ಲಿನ ನೂರಕ್ಕೂ ಹೆಚ್ಚು ವಾದ್ಯಗಳ ಬೃಹತ್ ಪ್ರದರ್ಶನವು ಅವುಗಳ ಉಗಮ, ತಯಾರಿಕೆ ಮತ್ತು ನುಡಿಸುವ ಶೈಲಿಯ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ. ಹಾಗೆಯೇ, ‘ಮೆಲ್ಟಿಂಗ್ ಪಾಟ್’ (Melting Pot) ವಿಭಾಗವು ವಯಲಿನ್ ಮತ್ತು ಹಾರ್ಮೋನಿಯಂನಂತಹ ವಾದ್ಯಗಳ ಇತಿಹಾಸದ ಜೊತೆಗೆ ‘ನೋಟ್ಟುಸ್ವರ’ ಹಾಗೂ ಬ್ರಾಸ್ ಬ್ಯಾಂಡ್ನ ಕುತೂಹಲಕಾರಿ ಕಥೆಗಳನ್ನು ತೆರೆದಿಡುತ್ತದೆ.
ನಮ್ಮ ಮಣ್ಣಿನ ಸೊಗಡನ್ನು ನೆನಪಿಸುವ ‘ಸಾಂಗ್ಸ್ ಆಫ್ ದಿ ಪೀಪಲ್’ (Songs of the People) ಗ್ಯಾಲರಿಯು ಜನಪದ ಕಲೆ ಮತ್ತು ನೃತ್ಯದ ವೈಭವವನ್ನು ಸಾರುತ್ತದೆ. ಇಲ್ಲಿನ ಯಾಂತ್ರಿಕ ಗೊಂಬೆಗಳು (Mechanized puppets), ಜಾನಪದ ಭಿತ್ತಿಚಿತ್ರಗಳು ಮತ್ತು ಕಾವಡ್ ಬಾಕ್ಸ್ (Kaavad box) ಜನಪದ ಕಲಾವಿದರ ಜೀವನ ಹಾಗೂ ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ಭಾರತೀಯ ಶಾಸ್ತ್ರೀಯ ಸಂಗೀತದ ಅಡಿಪಾಯವನ್ನು ಪರಿಚಯಿಸುವ ‘ಲಿವಿಂಗ್ ಟ್ರೆಡಿಷನ್ಸ್’ (Living Traditions) ವಿಭಾಗವು ಶ್ರುತಿ, ರಾಗ, ತಾಳ, ಘರಾಣಾ ಮತ್ತು ಕಚೇರಿಗಳಂತಹ ಪದ್ಧತಿಗಳ ಬಗ್ಗೆ ಅರಿವು ಮೂಡಿಸುತ್ತದೆ. ಕೊನೆಯದಾಗಿ, ಇಂದಿನ ಯುವ ಪೀಳಿಗೆಗೆ ಆಪ್ತವಾಗುವ ‘ಕಾಂಟೆಂಪರರಿ ಎಕ್ಸ್ಪ್ರೆಶನ್ಸ್’ (Contemporary expressions) ವಿಭಾಗವು ಇಂಡಿ-ಪಾಪ್ ಮತ್ತು ರಾಕ್ ಸಂಗೀತದ ಪ್ರಭಾವವನ್ನು ತೋರಿಸುತ್ತದೆ. ಇಲ್ಲಿನ ದಲೇರ್ ಮೆಹಂದಿ ಅವರ ಉಡುಪು, ವಿಭಿನ್ನವಾದ ಆಟೋ ರಿಕ್ಷಾ ಮತ್ತು ಮಿನಿ ಥಿಯೇಟರ್ಗಳು ಆಧುನಿಕ ಸಂಗೀತದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.
ಸೌಂಡ್ ಗಾರ್ಡನ್ (ನಾದ ಲೋಕದ ಉದ್ಯಾನ)
ಕಣ್ಣಿಗೆ ಹಿತ ನೀಡುವಂತೆ ವಿನ್ಯಾಸಗೊಳಿಸಲಾದ ಸೌಂಡ್ ಗಾರ್ಡನ್ ಪ್ರತಿಯೊಬ್ಬರೂ ಹೆಚ್ಚು ಸಮಯ ಕಳೆಯಲು ಬಯಸುವ ಅದ್ಭುತ ತಾಣ. ಇಲ್ಲಿನ ವಿಶಿಷ್ಟ ಸಂಗೀತ ಸ್ಥಾಪನೆಗಳು (Musical installations) ಶಬ್ದ ಮತ್ತು ಕಂಪನಗಳ ವೈವಿಧ್ಯತೆಯನ್ನು ಅನ್ವೇಷಿಸಲು ನಿಮ್ಮನ್ನು ಆಹ್ವಾನಿಸುತ್ತವೆ. ಕಲ್ಲು ಮತ್ತು ಲೋಹಗಳ ಮೂಲಕವೂ ಸಂಗೀತವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ನೀವಿಲ್ಲಿ ಕಣ್ಣಾರೆ ಕಂಡು, ಕಿವಿಗಳಾರೆ ಆಲಿಸಿ, ಮನಸಾರೆ ಅನುಭವಿಸಬಹುದು. ಕಲ್ಲುಗಳಿಂದ ಹೊರಹೊಮ್ಮುವ ಗುನುಗು ಮತ್ತು ಗಾಯನದಂತಹ ಕಂಪನಗಳು ನಿಮ್ಮನ್ನು ಬೆರಗುಗೊಳಿಸುವುದಷ್ಟೇ ಅಲ್ಲದೆ, ಆತ್ಮಕ್ಕೆ ನೆಮ್ಮದಿ ನೀಡುತ್ತವೆ. ಬೆಂಗಳೂರಿನ ಆಹ್ಲಾದಕರ ಹವಾಮಾನದಲ್ಲಿ, ಹಸಿರಿನ ಹೊದಿಕೆಯಡಿ ತೆರೆದ ಗಾಳಿಯಲ್ಲಿ ಸಂಗೀತವನ್ನು ಆಸ್ವಾದಿಸುವುದು ಒಂದು ಅಪರೂಪದ ಅನುಭವ.
ಸಂಗೀತ ಕಲಿಕೆ (Music Learning)
ಸಂಗೀತ ಶಿಕ್ಷಣದಲ್ಲಿ ಉತ್ಕೃಷ್ಟ ಕೇಂದ್ರವಾಗಬೇಕೆಂಬ ಗುರಿಯೊಂದಿಗೆ, IME ಸಂಸ್ಥೆಯು ಪ್ರಖ್ಯಾತ ತಜ್ಞರ ಮಾರ್ಗದರ್ಶನದಲ್ಲಿ ಸಂಗೀತ ಮತ್ತು ನೃತ್ಯ ತರಗತಿಗಳನ್ನು ಆರಂಭಿಸಿದೆ. ನೀವು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಗಾಯನ, ಮೃದಂಗ, ತಬಲಾ, ವಯಲಿನ್, ವೀಣೆ, ಸುಗಮ ಸಂಗೀತ, ಭರತನಾಟ್ಯ ಅಥವಾ ಗಿಟಾರ್, ಕೀಬೋರ್ಡ್ ಮತ್ತು ಡ್ರಮ್ಸ್ ಕಲಿಯಲು ಆಸಕ್ತಿ ಹೊಂದಿದ್ದರೆ, ‘ಐಎಂಇ’ ನಿಮಗೆ ಸೂಕ್ತ ವೇದಿಕೆಯಾಗಿದೆ. ಇಲ್ಲಿ ಮಕ್ಕಳು ಮತ್ತು ವಯಸ್ಕರಿಗಾಗಿ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತದೆ.
ಸಂದರ್ಶಕರ ಮಾಹಿತಿಗಾಗಿ:
ಸಮಯ:
ಸೋಮವಾರ ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿ ಮ್ಯೂಸಿಯಂ ತೆರೆದಿರುತ್ತದೆ.
ವಾರದ ದಿನಗಳಲ್ಲಿ: ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ.
ವಾರಾಂತ್ಯದಲ್ಲಿ: ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ.(ಗಮನಿಸಿ: ಟಿಕೆಟ್ ಮಾರಾಟವು ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ)
ತಲುಪುವ ಹಾದಿ:
ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಬೆಂಗಳೂರಿನ ದಕ್ಷಿಣ ಭಾಗದ ಜೆ.ಪಿ. ನಗರದಲ್ಲಿದೆ. ಬ್ರಿಗೇಡ್ ಮಿಲೇನಿಯಂ ಅವೆನ್ಯೂನ ಸುಂದರ ಪರಿಸರದಲ್ಲಿ ನೆಲೆಸಿರುವ ಈ ತಾಣವು ನಗರದ ಜನನಿಬಿಡತೆಯ ನಡುವೆಯೂ ಶಾಂತಿಯುತ ವಾತಾವರಣವನ್ನು ಹೊಂದಿದೆ.
ಪ್ರವೇಶ ದರ (ಟಿಕೆಟ್ ದರ):
ವಾರದ ದಿನಗಳು ಮತ್ತು ವಾರಾಂತ್ಯಗಳಿಗೆ ಅನುಗುಣವಾಗಿ ದರಗಳು ಈ ಕೆಳಗಿನಂತಿವೆ. ಟಿಕೆಟ್ಗಳನ್ನು ನೀವು ಆನ್ಲೈನ್ ಮೂಲಕವೂ ಕಾಯ್ದಿರಿಸಬಹುದು.