ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ಭಾರತದಲ್ಲಿ ಸುಗ್ಗಿ ಕಾಲದ (Harvest Season) ಆರಂಭವನ್ನು ಹೊಸ ವರ್ಷದ ಸಂಭ್ರಮವನ್ನಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಚಳಿಗಾಲವು ಉತ್ತುಂಗದಲ್ಲಿರುವಾಗ, ದೇಶದಾದ್ಯಂತ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಈ ಸುಗ್ಗಿ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಎಂಬ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದಲ್ಲೂ ಸಂಕ್ರಾಂತಿಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಜನವರಿ 14 ರಂದು ಬರುವ ಈ ಹಬ್ಬವು ಹಿಂದೂಗಳ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಮಕರ ಸಂಕ್ರಾಂತಿಯ ಮಹತ್ವ

ಸಂಕ್ರಾಂತಿ ಜಾತ್ರೆ, ಬಿಜಾಪುರ
ಮಕರ ಸಂಕ್ರಾಂತಿಯು ಕೇವಲ ಆಚರಣೆಯಲ್ಲ, ಅದಕ್ಕೆ ಖಗೋಳಶಾಸ್ತ್ರದ ಮಹತ್ವವೂ ಇದೆ. ಸೌರಮಾನ ಪದ್ಧತಿಯನ್ನು ಆಧರಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ (ಉತ್ತರ ದಿಕ್ಕಿಗೆ) ಚಲಿಸಲು ಪ್ರಾರಂಭಿಸುವ ಪುಣ್ಯಕಾಲವಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ.
ಕರ್ನಾಟಕದಲ್ಲಿ ಆಚರಣೆ

ಮಕರ ಸಂಕ್ರಾಂತಿ, ಕರ್ನಾಟಕ
‘ನಮಗೆ ಅನ್ನ ನೀಡುವ ಭೂತಾಯಿಗೆ ಕೃತಜ್ಞತೆ ಸಲ್ಲಿಸುವುದು” ಈ ಹಬ್ಬದ ಮುಖ್ಯ ಸಂದೇಶವಾಗಿದೆ. ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಹಂಚುವುದು ಇದರ ಉದ್ದೇಶ. ಹೊಸ ಬಟ್ಟೆ ಧರಿಸುವುದು, ರುಚಿಕರವಾದ ಅಡುಗೆ ಮಾಡುವುದು, ಪರಸ್ಪರ ಭೇಟಿಯಾಗುವುದು ಮತ್ತು ಸಿಹಿ ಹಂಚುವುದು ರಾಜ್ಯದಾದ್ಯಂತ ಕಂಡುಬರುವ ದೃಶ್ಯವಾಗಿದೆ.
ಕರ್ನಾಟಕದ ರೈತರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆ ಬೆಳೆಯಲು ಕಾರಣವಾದ ಸೂರ್ಯ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಸುಗ್ಗಿಯ ಮೊದಲ ಫಸಲನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಹಬ್ಬಕ್ಕೂ ಮುನ್ನವೇ ಮನೆಗಳನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿದು, ಬಾಗಿಲಿಗೆ ಮಾವಿನ ತೋರಣ ಮತ್ತು ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಲಾಗುತ್ತದೆ.
ಸಂಕ್ರಾಂತಿಯ ವಿಶೇಷ ಖಾದ್ಯಗಳು

ಪಾಯಸ
ಸಂಕ್ರಾಂತಿ ಎಂದರೆ ಎಳ್ಳು ಮತ್ತು ಬೆಲ್ಲದ ಸವಿಯೂಟ. ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆ ನೀಡುವ ಎಳ್ಳು ಮತ್ತು ಬೆಲ್ಲವನ್ನು ಈ ಹಬ್ಬದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಕ್ಕಿ ಮತ್ತು ಬೇಳೆಯಿಂದ ತಯಾರಿಸಿದ ‘ಹುಗ್ಗಿ’ ಅಥವಾ ‘ಕಿಚಡಿ’ಯನ್ನು (Sweet and Salted Pongal) ತುಪ್ಪದೊಂದಿಗೆ ಸವಿಯಲಾಗುತ್ತದೆ. ಎಳ್ಳು ಮತ್ತು ಕಿಚಡಿಯನ್ನು ದಾನ ಮಾಡುವುದು ಶ್ರೇಷ್ಠವೆಂದು ನಂಬಲಾಗಿದೆ. ಎಳ್ಳಿನ ಉಂಡೆ, ಪೊಂಗಲ್, ವಡೆ, ಪುಳಿಯೋಗರೆ ಮತ್ತು ಪಾಯಸ ಈ ಹಬ್ಬದ ವಿಶೇಷ ತಿನಿಸುಗಳಾಗಿವೆ.

ಎಳ್ಳು ಬೆಲ್ಲ
ಕರ್ನಾಟಕದಲ್ಲಿ ಸಂಕ್ರಾಂತಿಯಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವಾಗ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂದು ಹೇಳುವುದು ರೂಢಿ. ಕಡಲೆಕಾಯಿ ಬೀಜ, ಹುರಿಗಡಲೆ, ಕೊಬ್ಬರಿ ಮತ್ತು ಬೆಲ್ಲದ ಮಿಶ್ರಣವಾದ ಈ ‘ಎಳ್ಳು-ಬೆಲ್ಲ’ ಆರೋಗ್ಯಕರವಾದ ತಿಂಡಿಯೂ ಹೌದು.
ಇತರೆ ಸಾಂಸ್ಕೃತಿಕ ಚಟುವಟಿಕೆಗಳು

ರಂಗೋಲಿ
ಸಂಕ್ರಾಂತಿಯಂದು ಆಕಾಶವು ಬಣ್ಣ ಬಣ್ಣದ ಗಾಳಿಪಟಗಳಿಂದ ತುಂಬಿರುತ್ತದೆ. ಗಾಳಿಪಟ ಹಾರಿಸುವುದು, ದೇವಾಲಯಗಳಿಗೆ ಭೇಟಿ ನೀಡುವುದು, ರಂಗೋಲಿ ಸ್ಪರ್ಧೆ ಮತ್ತು ಕುಸ್ತಿ ಪಂದ್ಯಾವಳಿಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.
ಕಿಚ್ಚು ಹಾಯಿಸುವುದು: ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ‘ಕಿಚ್ಚು ಹಾಯಿಸುವುದು’ ಎಂಬ ರೋಮಾಂಚಕ ಆಚರಣೆ ನಡೆಯುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಬಣ್ಣದ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಿ, ಮೆರವಣಿಗೆಯ ಮೂಲಕ ಕರೆತಂದು ಬೆಂಕಿಯ ಮೇಲೆ ನಡೆಸುತ್ತಾರೆ. ಇದು ಗ್ರಾಮಕ್ಕೆ ಮತ್ತು ಜನರಿಗೆ ಒಳಿತನ್ನು ತರುತ್ತದೆ ಎಂಬ ನಂಬಿಕೆಯಿದೆ. ಈ ದೃಶ್ಯವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.
ಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರು

ಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರು
ಬೆಂಗಳೂರಿನಲ್ಲಿ ಸಂಕ್ರಾಂತಿಯ ಪ್ರಮುಖ ಆಕರ್ಷಣೆಯೆಂದರೆ ಕೆಂಪೇಗೌಡರು 16ನೇ ಶತಮಾನದಲ್ಲಿ ನಿರ್ಮಿಸಿದ ಗವಿ ಗಂಗಾಧರೇಶ್ವರ ದೇವಾಲಯ. ಏಕಶಿಲೆಯಲ್ಲಿ ನಿರ್ಮಿಸಲಾದ ಈ ಗುಹಾಂತರ ದೇವಾಲಯವು ವಾಸ್ತುಶಿಲ್ಪದ ವಿಸ್ಮಯವಾಗಿದೆ. ಪ್ರತಿ ವರ್ಷ ಸಂಕ್ರಾಂತಿಯಂದು ಇಲ್ಲಿ ಒಂದು ಪವಾಡವೇ ನಡೆಯುತ್ತದೆ. ಸೂರ್ಯನ ಕಿರಣಗಳು ನಿಖರವಾಗಿ ನಂದಿಯ ಕೊಂಬಿನ ಮೂಲಕ ಹಾದು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸುತ್ತವೆ. ಈ ದೈವಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಸಿದ್ದೇಶ್ವರ ಜಾತ್ರೆ, ವಿಜಯಪುರ/ ಬಿಜಾಪುರ

ಸಿದ್ದೇಶ್ವರ ಜಾತ್ರೆ, ವಿಜಯಪುರ / ಬಿಜಾಪುರ
ಉತ್ತರ ಕರ್ನಾಟಕದ ವಿಜಯಪುರದಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆಯು ಸಂಕ್ರಾಂತಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ, ಕೃಷಿ ಮೇಳ, ಕುಸ್ತಿ ಪಂದ್ಯಗಳು ಮತ್ತು ಸಂತೆಗಳು ಗ್ರಾಮೀಣ ಸೊಗಡನ್ನು ಅನಾವರಣಗೊಳಿಸುತ್ತವೆ. ಬಟ್ಟೆ, ಆಟಿಕೆಗಳು, ಸಿಹಿತಿಂಡಿಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮಾರುವ ಬಣ್ಣ ಬಣ್ಣದ ಮಳಿಗೆಗಳು ಜಾತ್ರೆಯ ಮೆರಗು ಹೆಚ್ಚಿಸುತ್ತವೆ.
ಈ ಹಬ್ಬವು ಜನರಲ್ಲಿ ದಯೆ, ಕೃತಜ್ಞತೆ ಮತ್ತು ಪ್ರೀತಿಯನ್ನು ಬೆಸೆಯುತ್ತದೆ.
