ಲಾಲ್ಗುಳಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಡಿಮೆ ಜನಪ್ರಿಯ ಜಲಪಾತ. ಲಾಲ್ಗುಳಿ ಒಂದು ಬಹು-ಹಂತದ ಜಲಪಾತವಾಗಿದ್ದು, ಇಲ್ಲಿ ಕಾಳಿ ನದಿಯು ವಿವಿಧ ಸ್ಥಳಗಳಲ್ಲಿ 61 ರಿಂದ 91 ಮೀಟರ್ ಎತ್ತರದಿಂದ ಕೆಳಗೆ ಹರಿಯುತ್ತದೆ. ಇದು ಹಸಿರು ಕಾಡುಗಳು, ಶಾಂತ ಮತ್ತು ಸುಂದರವಾದ ಪರಿಸರದೊಂದಿಗೆ ರಮಣೀಯ ಮತ್ತು ಛಾಯಾಚಿತ್ರಕ್ಕೆ ಸೂಕ್ತವಾದ ನೋಟಗಳನ್ನು ನೀಡುತ್ತದೆ.
ಹಿಂದೆ ಲಾಲ್ಗುಳಿಯನ್ನು ಸಾವಿನ ವಲಯವೆಂದು ನಂಬಲಾಗಿತ್ತು. ಸೋಂದಾದ ಅರಸರು ಶಿಕ್ಷೆಗೊಳಗಾದ ಅಪರಾಧಿಗಳನ್ನು ಲಾಲ್ಗುಳಿ ಜಲಪಾತದ ಸಮೀಪದ ಬೆಟ್ಟಗಳಿಗೆ ಕರೆತಂದು, ಕಮರಿಯಿಂದ ಕೆಳಗೆ ತಳ್ಳುತ್ತಿದ್ದರು ಎಂದು ನಂಬಲಾಗಿದೆ. ಇಲ್ಲಿ ಇಂದು ಹನುಮಾನ್ ದೇವಾಲಯವಿದೆ.
ಭೇಟಿ ನೀಡಲು ಉತ್ತಮ ಸಮಯ
ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಲಾಲ್ಗುಳಿ ಜಲಪಾತಗಳಿಗೆ ಭೇಟಿ ನೀಡುವುದು ಉತ್ತಮ. ಬೇಸಿಗೆಯಲ್ಲಿ ಜಲಪಾತಗಳು ಒಣಗಬಹುದು ಮತ್ತು ಮಳೆಗಾಲದಲ್ಲಿ ತುಂಬಾ ಜಾರುವ ಮತ್ತು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಇದೆ. ಜಲಪಾತವು ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ಹತ್ತಿರದ ಸ್ಥಳಗಳು
ದಂಡೇಲಿ (35 ಕಿ.ಮೀ), ಅಣಶಿ ರಾಷ್ಟ್ರೀಯ ಉದ್ಯಾನವನ (79 ಕಿ.ಮೀ), ಸತೋಡಿ ಜಲಪಾತಗಳು (44 ಕಿ.ಮೀ), ಅತ್ತಿವೇರಿ ಪಕ್ಷಿಧಾಮ (66 ಕಿ.ಮೀ), ಸೋಂದಾ (52 ಕಿ.ಮೀ) ಮತ್ತು ಸಿಂಥೇರಿ ಬಂಡೆಗಳು (55 ಕಿ.ಮೀ) ಈ ಪ್ರದೇಶದಲ್ಲಿ ಜಲಪಾತಗಳ ಜೊತೆಗೆ ಭೇಟಿ ನೀಡಬಹುದಾದ ಕೆಲವು ಆಸಕ್ತಿದಾಯಕ ಸ್ಥಳಗಳು.
ತಲುಪುವುದು ಹೇಗೆ?
ಲಾಲ್ಗುಳಿ ಬೆಂಗಳೂರಿನಿಂದ 439 ಕಿ.ಮೀ ಮತ್ತು ಜಿಲ್ಲಾ ಕೇಂದ್ರವಾದ ಕಾರವಾರದಿಂದ 114 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ (75 ಕಿ.ಮೀ ದೂರ). ಕಾರವಾರ/ಹುಬ್ಬಳ್ಳಿ ಅಥವಾ ದಂಡೇಲಿಯಿಂದ ಲಾಲ್ಗುಳಿ ಜಲಪಾತಗಳನ್ನು ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ವಸತಿ
ಯಲ್ಲಾಪುರ ನಗರದಲ್ಲಿ (ಜಲಪಾತಗಳಿಂದ 17 ಕಿ.ಮೀ) ಅಥವಾ ದಂಡೇಲಿಯಲ್ಲಿ (35 ಕಿ.ಮೀ ದೂರ) ವಸತಿ ಆಯ್ಕೆಗಳು ಲಭ್ಯವಿದೆ.
